ಅಲೆಗ್ಸಾಂಡರ್ ಪೋಪ್ : -
1688-1744. ಪ್ರಸಿದ್ಧ ಆಂಗ್ಲಕವಿ. ವಿಡಂಬನಕಾರ. 1688ರಲ್ಲಿ ಲಂಡನ್ನಿನಲ್ಲಿ ಮಧ್ಯಮವರ್ಗದ ಗೌರವಸ್ಥ ಕುಟುಂಬವೊಂದರಲ್ಲಿ ಹುಟ್ಟಿದ. ತಂದೆ ಬಟ್ಟೆ ವ್ಯಾಪಾರಿ. ರೋಮನ್ ಕ್ಯಾತೊಲಿಕ್ ಪಂಗಡಕ್ಕೆ ಈಚೆಗೆ ಸೇರಿದ್ದರು. ತಂದೆ ಲಂಡನ್ನಿನಿಂದ ವಿಂಡ್ಸರ್ ಫಾರೆಸ್ಟ್‍ನ ಹೊರವಲಯಕ್ಕೆ ಹೋಗಿ ನೆಲಸಿದ ಬಳಿಕ ಮಗನ ವಿದ್ಯಾಭ್ಯಾಸಕ್ಕೆ ತೊಂದರೆ ಆದಂತೆ ಕಾಣುತ್ತದೆ. ಮನೆಯ ಪಾಠದ ಏರ್ಪಾಟಾಗಿ ಹೆಚ್ಚಾಗಿ ಕ್ರೈಸ್ತ ಪಾದ್ರಿಗಳಿಂದ ಕೆಲವು ಕಾಲ ಅನಿಯತಕಾಲಿಕ ಶಿಕ್ಷಣ ದೊರೆಯಿತು. ತನ್ನ ಸಹಜ ಕುತೂಹಲ, ಆಸಕ್ತಿ, ಶ್ರಮಗಳಿಂದ ಬಾಲಕ ಅಲೆಗ್ಸಾಂಡರ್ ಕಲಿತುದೇ ಹೆಚ್ಚು. ಲ್ಯಾಟಿನ್ನಿನಲ್ಲಿ ತಕ್ಕ ಮಟ್ಟಿನ ಸ್ಥಾನವನ್ನೂ ಅರ್ಥವಾಗುವಷ್ಟರ ಮಟ್ಟಿಗೆ ಗ್ರೀಕ್ ಭಾಷಾ ಪರಿಚಯವನ್ನು ಪಡೆದ.

ಬಾಲ್ಯದಲ್ಲಿ ತೀವ್ರವಾದ ಕಾಯಿಲೆಯ ಪರಿಣಾಮವಾಗಿ ದೈಹಿಕ ಬೆಳವಣಿಗೆ ಕುಂಠಿತಗೊಂಡು ಕುಬ್ಜನಾಗಿ ಆಯುಷ್ಯ ಪೂರ್ತಿದುರ್ಬಲ ಹಾಗೂ ವಿರೂಪ ಹಾಗೂ ವಿರೂಪಕಾಯನಾಗಿ ಇರಬೇಕಾಯಿತು. ಅತ್ಯಂತ ಸೂಕ್ಷ್ಮ ಸ್ವಭಾವದವನಾದ ಈತ ತನ್ನ ದೇಹ ವೈಕಲ್ಯದ ಬಗ್ಗೆ ಬಹುವಾಗಿ ನೊಂದುಕೊಳ್ಳುತ್ತಿದ್ದ. ಇದರಿಂದ ಈತನಿಗೆ ಕ್ರೀಡಾ ವಿನೋದಗಳ ಬಗೆಗೆ ಅಸಹನೆ ಉಂಟಾದುದು ಸಹಜವಾಗಿತ್ತು. ಮನಸ್ಸು ಬೌದ್ಧಿಕ ಚಟುವಟಿಕೆಗಳ ಕಡೆಗೆ ಹರಿಯಿತು. ಅದಕ್ಕೆ ಸರಿಯಾಗಿ ಅಸಾಧಾರಣ ಬುದ್ಧಿಚಾತುರ್ಯ, ಚುರುಕುತನ ಮತ್ತು ಕಾವ್ಯಪ್ರತಿಭೆ ದೈವದತ್ತವೆಂಬಂತೆ ಇದ್ದವು. ಕೇವಲ ಹನ್ನೆರಡನೆಯ ವಯಸ್ಸಿನಲ್ಲೇ ಭರವಸೆ ಮೂಡಿಸುವಂಥ ಓಡ್ ಆನ್ ಸಾಲಿಟ್ಯೂಡ್ ಎಂಬ ಪದ್ಯವನ್ನುರಚಿಸಿದ್ದ. ಹದಿನಾಲ್ಕನೆಯ ವಯಸ್ಸಿನಲ್ಲಿ ಬರೆದ ಆನ್ ಸೈಲೆನ್ಸ್ ಎಂಬ ಕವಿತೆ ಪ್ರೌಢವಾಗಿಯೇ ಇತ್ತು. ಆದರೆ, ಕಿರಿಯ ವಯಸ್ಸಿನಿಂದಾಗಿ ಈ ಪ್ರೌಢ ಕವಿತಾಶಕ್ತಿ ಯಾರ ಗಮನವನ್ನೂ ಸೆಳೆಯದೆ ಅಜ್ಞಾತವಾಗಿಯೇ ಉಳಿಯಿತು. 17ನೆಯ ವಯಸ್ಸಿನಲ್ಲಿ ವೈಚರ್ಲಿ ಎಂಬ ಹಿರಿಯ ಸಾಹಿತಿ ಈ ಕಿರಿಯನ ಪ್ರತಿಭೆಯನ್ನು ಗುರುತಿಸಿ ತನ್ನ ಕವನಗಳ ಹಸ್ತಪ್ರತಿಯನ್ನು ಪ್ರಕಟನೆಗೆ ಸಿದ್ಧಪಡಿಸಲು ಕೊಟ್ಟ. ಆ ಪದ್ಯಗಳ ಮೇಲೆ ಕೊಂಚ ಕೈಯಾಡಿಸಲು ಅನುಮತಿ ಪಡೆದ. ಈ ಹದಿಹರೆಯದ ಹುಡುಗ ಕೆಲವು ಪದಗಳನ್ನೂ ಸಾಲುಗಳನ್ನೂ ಅಲ್ಲಲ್ಲಿ ಬದಲಿಸಿ ಬರೆದು ಅವು ತುಂಬಾ ಚೆನ್ನಾದ ಪದ್ಯಗಳಾಗುವಂತೆ ಮಾಡಿದ್ದನ್ನು ಕಂಡು ವೈಚರ್ಲಿ ಬೆರಗಾದ. ಈ ಬಾಲ ಪ್ರತಿಭಾಶಾಲಿಯನ್ನು ಲಂಡನ್ನಿನ ಸಾಹಿತ್ಯ ಸಮಾಜದ ಜಾಣರಿಗೆ ಪರಿಚಯ ಮಾಡಿಕೊಟ್ಟ. ಇದರಿಂದಾಗಿ ಅಡಿಸನ್, ಸ್ಟೀಲ್, ಸ್ವಿಫ್ಟ್ ಆರ್ಬತ್‍ನಾಟ್ ಇವನ ಸ್ನೇಹಿತರಾದರು.

1709ರಲ್ಲಿ ಈತನ ಮೊದಲ ಕಾವ್ಯ ಪ್ಯಾಸ್ಟೊರಲ್ಸ್ ಪ್ರಕಟವಾಗಿ ಹಿರಿಯ ಸಾಹಿತಿಗಳ ಮತ್ತು ವಿಮರ್ಶಕರ ಮೆಚ್ಚುಗೆಯನ್ನು ಪಡೆಯಿತು. 1711ರಲ್ಲಿ ಎಸ್ಸೇ ಆನ್ ಕ್ರಿಟಿಸಿಸಮ್ ಎಂಬ ಕಾವ್ಯವೂ ಮತ್ತೆರಡು ವರ್ಷಗಳಲ್ಲಿ ವಿಂಡ್ಸರ್ ಫಾರೆಸ್ಟ್ ಎಂಬ ಕಾವ್ಯವೂ ಹೊರಬಂದವು. ಪೋಪ್ ಅಗ್ರಪಂಕ್ತಿಯ ಕವಿಗಳ ಸಾಲಿನಲ್ಲಿ ನಿಂತ. ಕಾವ್ಯಲೋಕದಲ್ಲಿ ಈತನ ಕೀರ್ತಿಯ ಸ್ಥಾನ ಭದ್ರವಾಯಿತು. ಭಾಷೆ ಮತ್ತು ಛಂದಸ್ಸುಗಳ ಮೇಲಿದ್ದ ಹಿಡಿತ, ಲ್ಯಾಟಿನ್ ಕವಿಗಳ ಮಾದರಿಗಳನ್ನೇ ಅನುಕರಣೆ ಮಾಡಿದ್ದರೂ ಸ್ವತಂತ್ರವಾದ ಅಭಿವ್ಯಕ್ತಿ. ಎಲ್ಲ ಸಾಲುಗಳ ಮೇಲೂ ಒತ್ತಿದ್ದ ಸ್ವಂತಿಕೆಯ ಮುದ್ರೆ. ಈತನ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದ್ದವು. ವಿಂಡ್ಸರ್ ಫಾರೆಸ್ಟ್ ಎಂಬ ಕೃತಿ ಈ ಕವಿಯ ಪ್ರತಿಭೆಯನ್ನೂ ಸೂಕ್ಷ್ಮವಾದ ಭಾವನಾ ವಿಲಾಸವನ್ನೂ ತೋರಿಸುತ್ತದೆ. 1714ರಲ್ಲಿ ರೇಪ್ ಆಫ್ ದಿ ಲಾಕ್ ಎಂಬ ಕೃತಿ ಪ್ರಕಟವಾಗಿ ಸಾಹಿತ್ಯ ಜಗತ್ತಿನಲ್ಲಿ ಕೋಲಾಹಲವನ್ನೆಬ್ಬಿಸಿತು. ಕ್ಷುದ್ರವಾದವಸ್ತು, ಗಂಭೀರವಾದ ಮಹಾಕಾವ್ಯದ ಶೈಲಿ ಮತ್ತು ಭಾಷೆ-ಈ ವಿಚಿತ್ರ ಮೇಳದಿಂದ ಇದೊಂದು ಅನ್ಯಾದೃಶವಾದ ಅಣಕು ಮಹಾಕಾವ್ಯವಾಯಿತು. ಪೋಪನ ಅಸಾಧಾರಣ ಬುದ್ಧಿಚಾತುರ್ಯ ವಿನೋದಶೀಲತೆ. ವಿಡಂಬನ ಶಕ್ತಿ. ಕಾವ್ಯರಚನಾ ಸಾಮಥ್ರ್ಯ ಓದುಗರೆಲ್ಲರನ್ನೂ ದಂಗು ಬಡಿಸುತ್ತವೆ. ಈ ಕೃತಿಯನ್ನು ಓದಿ ನಗದವರು, ವಿಸ್ಮಿತರಾಗದವರು ಮೆಚ್ಚಿದವರು ವಿರಳ.

	1713-204 ಅವಧಿಯಲ್ಲಿ ಪೋಪ್, ಹೋಮರ್‍ನ `ಇಲಿಯೆಡ್ ಮಹಾಕಾವ್ಯವನ್ನು ಇಂಗ್ಲಿಷಿಗೆ ಅನುವಾದಿಸಿದರು. ಅಲವು ನ್ಯೂನತೆಗಳಿದ್ದರೂ ಜನಪ್ರಿಯವಾಯಿತು. 17ನೆಯ ವಯಸ್ಸಿಗೆ ಸಾಹಿತ್ಯ ಲೋಕಕ್ಕೆ ಕಾಲಿರಿಸಿದ ಈತ 30 ವರ್ಷದವನಾಗುವ ವೇಳೆಗೆ ಗಣ್ಯ ಕವಿಪುಂಗವನೆನಿಸಿದ. ಹೀಗೆ ದೊರೆತ ಪ್ರೋತ್ಸಾಹದಿಂದ ಹೋಮರನ ಇನ್ನೊಂದು ಮಹಾಕಾವ್ಯ "ಒಡಿಸಿ"ಯನ್ನೂ ಭಾಷಾಂತರ ಮಾಡಿದ (1725-26). ಈ ಎರಡೂ ಕೃತಿಗಳಿಂದ ಕವಿಗೆ ಹತ್ತು ಸಾವಿರ ಪೌಂಡ್ ಹಣ ಬಂದಿತು. ಪಿತ್ರಾರ್ಜಿತವಾದ ಆಸ್ತಿಯೊಡನೆ ಈ ಸಂಭಾವನೆಯ ಹಣವೂ ಸೇರಿ ಇದರಿಂದಾಗಿ ಕವಿ ತನ್ನ ಜೀವಮಾನಪರ್ಯಂತ ಶ್ರೀಮಂತ ಜೀವನವನ್ನು ನಡೆಸಲು ಸಾಧ್ಯವಾಯಿತು. 

	1728ರಲ್ಲಿ ತಂದೆ ತೀರಿ ಹೋಗಿ ಟ್ವಿಕನ್‍ಹ್ನಾಮ್‍ನಲ್ಲಿ ಕೊಂಡಿದ್ದ ಹೊಸ ಮನೆಗೆ ತಾಯಿಯೊಂದಿಗೆ ಹೋಗಿ ನೆಲಸಿದ. ಕೊನೆಯವರೆಗೂ ಅದೇ ಇವನ ಮನೆಯಾಯಿತು. ತಾಯಿಯನ್ನು ಅತ್ಯಂತ ಅಕ್ಕರೆಯಿಂದ ನೋಡಿಕೊಂಡ. ಈತ ಮದುವೆಯಾಗಲೇ ಇಲ್ಲ. 

ಪೋಪ್ ತುಂಬಾ ಸೂಕ್ಷ್ಮ ಸ್ವಭಾವದವ. ಸ್ವಾಭಿಮಾನಿ. ತನ್ನ ದೈಹಿಕ ವಿರೂಪ - ದುರ್ಬಲತೆಗಳ ಬಗ್ಗೆ ಯಾರೂ ಏನು ಆಡಿಕೊಳ್ಳುವರೋ ಎಂದು ಸದಾ ಸಂದೇಹ ಪೀಡಿತನಾಗಿರುತ್ತಿದ್ದ. ಕೊಂಚ ಸಂಶಯ ಬಂದರೂ ಕೆರಳಿ ಕೃದ್ಧನಾಗಿ ಅಂತಹವರ ಮೇಲೆ ತನ್ನ ಹರಿತವಾದ ಲೇಖನಿಯನ್ನೆತ್ತಿ ಆಕ್ರಮಣ ಮಾಡುತ್ತಿದ್ದ. ನಿಶಿತಮತಿ, ಕಾವ್ಯರಚನಾ ಸಾಮಥ್ರ್ಯ ವಿಡಂಬನಾ ಚಾತುರ್ಯಗಳೇ ಅಸ್ತ್ರಗಳು. ತನ್ನ ವಿರೋಧಿಗಳನ್ನು, ಕೆಲವು ವಿರೋಧಿಗಳೆಂದು ತಾನು ಭಾವಿಸಿದವರನ್ನು ಚೆನ್ನಾಗಿ ಲೇವಡಿ ಮಾಡಿ, ಬೈದು ಪದ್ಯಗಳನ್ನು ಬರೆಯುತ್ತಿದ್ದ. ಬರೆದು ನಿಜವಾದ ವಿರೋಧವನ್ನೇ ಕಟ್ಟಿಕೊಳ್ಳುತ್ತಿದ್ದ. ಇವನ ಮೇಲೆ ಅವರು, ಅವರ ಮೇಲೆ ಇವನೂ ಅಪಹಾಸ್ಯ ಮಾಡಿ ಬರೆಯುವುದು, ಹೀಗೆ ಇಂಥ ಜಗಳ ವೈಮನಸ್ಯಗಳು ನಿರಂತರವಾಗಿ ಇದ್ದೇ ಇರುತ್ತಿದ್ದವು. ಪರಸ್ಪರ ವೈಯುಕ್ತಿಕ ಟೀಕೆ ಚಾರಿತ್ರ್ಯವಧೆ ಮಾಡುವಂಥ ವಿಡಂಬನ ಕವನಗಳು ಹೇರಳವಾಗಿ ಬಂದವು. ಹೀಗೆ ಸ್ನೇಹಿತನಾಗಿದ್ದ ಅಡಿಸನ್‍ಗೂ ವಿರಸ ಉಂಟಾಯಿತು. ಪೋಪ್ ಮತ್ತು ಡೆನಿಸ್‍ರ ಜಗಳ ಕಡೆಯವರೆಗೂ ಹರಿಯಲೇ ಇಲ್ಲ. ಇನ್ನೂ ಹಲವಾರು ಜನ ಬರೆದ ನಿಂದನ ಪದ್ಯಗಳಿಗೆ, ಆಡಿದ ಕಟಕಿ ಮಾತುಗಳಿಗೆ ಉತ್ತರವಾಗಿ ಕಡೆಗೊಂದು ಸಲ 1728ರಲ್ಲಿ ತನ್ನ ಡನ್ಸಿಯೆಡ್ ಎಂಬ ವಿಡಂಬನ ಕಾವ್ಯದಲ್ಲಿ ಅವರೆಲ್ಲರನ್ನೂ ತರಾಟೆಗೆ ತೆಗೆದುಕೊಂಡು ಇನ್ನಿಲ್ಲದ ಹಾಗೆ ಲೇವಡಿ ಮಾಡಿಟ್ಟ. ಈ ಕಾವ್ಯ ಇಂದಿಗೂ ವಿಡಂಬನಾ ಸಾಹಿತ್ಯಕ್ಕೆ ಒಂದು ಅಪೂರ್ವ ಕಾಣಿಕೆಯಾಗಿದೆ. ಎಲ್ಲ ದೇಶ-ಕಾಲಗಳಲ್ಲೂ ಸಾಮಾನ್ಯವಾಗಿ ಎಲ್ಲ ಮಾನವ ಸಮಾಜಗಳಲ್ಲೂ ಕಾಣಬಹುದಾದಂಥ ಮೂರ್ಖತೆಯನ್ನು ವಿಡಂಬಿಸುವುದೇ ಈ ಕಾವ್ಯದ ಗುರಿಯಾಗಿರುವಂತೆ ಕಂಡರೂ ಕವಿ ಕಟುವಾಗಿ ಹಾಸ್ಯ ಮಾಡುವ ಮೂರ್ಖತೆಯ ಉದಾಹರಣೆಗಳೆಲ್ಲ ತನ್ನ ಸಮಕಾಲೀನ ವಿರೋಧಿಗಳನ್ನೆ ಕುರಿತದ್ದು ಎಂಬುದು ಸುಸ್ಪಷ್ಟವಾಗಿದೆ. ಲೂಹಿರ್ ಥಿಯೊಬಾಲ್ಡ್, ಕಾಲಿಸಿಬ್ಬಜಾನ್ ಡೆನಿಸ್, ರಿಚರ್ಡ್ ಬೆಂಟ್ಲೆ, ಆರನ್ ಹಿಲ್ ಮೊದಲಾದ ಸಮಕಾಲಿನ ಸಾಹಿತಿಗಳೆಲ್ಲ ಈ ವಿಡಂಬನೆ ಚಿತ್ರಿಸುವ ಮೂರ್ಖತೆಯ ವಿವಿಧ ಬಗೆಗಳ ಪ್ರತೀಕಗಳಾಗಿದ್ದಾರೆ. ಇವರಲ್ಲದೆ ಇನ್ನೂ ಹಲವಾರು ಜನ, ಲೋಕ ಮರೆಯಬಹುದಾಗಿದ್ದವರು ಈ ಕಾವ್ಯದಲ್ಲಿ ಅಮರರಾಗಿದ್ದಾರೆ. ಡನ್ಸಿಯಡ್‍ದ ಮೊದಲ ಮೂರು ಸಂಪುಟಗಳು ಬಂದುದು 1728ರಲ್ಲಿ.  ಪೋಪ್‍ನ ಕೊನೆಯ ಕೃತಿಯಾದ ದಿ ಎಸ್ಸೆ ಆನ್ ಮ್ಯಾನ್ ಬಂದುದು 1733ರಲ್ಲಿ. ಇದೊಂದು ನೀತಿ ತತ್ತ್ವಗಳನ್ನು ಕುರಿತ ಚಿಂತನಾತ್ಮಕ ಕಾವ್ಯ. ಒಳಗಿನ ಹುರುಳು ಸಾಧಾರಣ. ಆದರೆ, ಚತುರವಾದ ಮಾತುಗಳ ಜೋಡಣೆ, ಅಡಕವಾಗಿ ಹೇಳುವ ಸೂತ್ರಶೈಲಿ. ರಚನೆಯ ಕೌಶಲ್ಯ, ಜಾಣ್ಮೆ ಅಸಾಧಾರಣವಾದುವುಗಳಾಗಿ ಇದೊಂದು ಘನತರವಾದ ಕೃತಿಯಾಗಿದೆ. ಎಲ್ಲಿ ಕಣ್ಣು ಹಾಯಿಸಿದರೂ ಲೋಕಾಭಿರಾಮವಾದ ಜಾಣ್ಣುಡಿಗಳನ್ನು ಕಾಣಬಹುದು. ಈ ನೀತಿಸೂತ್ರಗಳು ಗಾದೆಗಳಂತೆ ಜನಜನಿತವಾಗಿವೆ.

ಈತ ಸಂಪಾದಿಸಿದ ಶೇಕ್ಸ್‍ಪಿಯರ್‍ನ ನಾಟಕಗಳ ಸಂಗ್ರಹವೂ ಇದೆ. ಇದರಲ್ಲಿನ ಪ್ರಸ್ತಾವನೆ ಸೊಗಸಾದ ಗದ್ಯಶೈಲಿಗೆ ಮಾದರಿಯಾಗಿದೆ. 

ಕಲಿಯಬೇಕೆಂಬ ತೀವ್ರ ಆಕಾಂಕ್ಷೆ. ಹಟ, ಮಾನವ ಸ್ವಭಾವವನ್ನು ಆಮೂಲಾಗ್ರವಾಗಿ ತಿಳಿಯಬೇಕೆಂಬ ತೀರಲಾಗದ ಕುತೂಹಲ ಈತನನ್ನು ಸದಾ ಅಧ್ಯಯನಶೀಲನಾಗುವಂತೆ ಮಾಡಿತು. ಈ ಶ್ರಮದಿಂದ ಯಾವ ಚಿಕಿತ್ಸೆಗೂ ಬಗ್ಗದ ಈತನ ದೈಹಿಕ ಅನಾರೋಗ್ಯ ಮತ್ತಷ್ಟು ಹದಗೆಟ್ಟಿತು. ಪರಿಣಾಮವಾಗಿ ಈತ 1744 ಮೇ 30ರಂದು ಮರಣ ಹೊಂದಿದ. ಟ್ವಿಕನ್ ಹ್ಯಾಮ್‍ನಲ್ಲಿ ಇವನ ಸಮಾಧಿ ಮಾಡಲಾಯಿತು. 

ದೇಹ ಸ್ಥಿತಿಯ ಸಮಸ್ಯೆಗಳು, ನಿರಂತರ ಅಧ್ಯಯನ, ವಿವಿಧ ವಿಡಂಬನೆಗಳರಚನೆಗೆ ಪ್ರಚೋದಕವಾದ ಸನ್ನಿವೇಶಗಳು, ಜಗಳ, ವೈಮನಸ್ಯಗಳ ಹೊರತು ಕವಿಯ ಬದುಕಿನಲ್ಲಿ ವಿಶೇಷವಾದ ಘಟನೆಗಳೇನೂ ಕಾಣುವುದಿಲ್ಲ.  ಈ ಎಲ್ಲ ವಿಷಯಗಳ ಸುತ್ತ ನಾನಾ ಕತೆಗಳು ಹುಟ್ಟಿಕೊಂಡಿವೆ.  ಅವುಗಳಲ್ಲಿ ಲೇಡಿ ಮೇರಿ ಪೊಟ್ರ್ಲೆ ಮಾಂಟೆಗೊ ಎಂಬುವಳೊಂದಿಗೆ ಆದ ಸ್ನೇಹ ಮತ್ತು ವಿರಸಗಳನ್ನು ಕುರಿತ ಕತೆ ಪ್ರಖ್ಯಾತವಾದುದು. ಆಕೆ ಶ್ರೀಮಂತ ಮನೆತನದವಳು. ಜಾಣೆ, ಚಲುವೆ, ಚಲುವೆಯಾಗಿದ್ದಷ್ಟೆ ಜಂಬಗಾತಿ. ಸಾಹಿತ್ಯ ಲೋಕದಲ್ಲಿ ಪ್ರತಿಷ್ಠಿತನಾಗಿದ್ದ ಕವಿ ತನ್ನಲ್ಲಿ ಪ್ರೇಮಯಾಚನೆ ಮಾಡಿದ. ತಾನು ನಿರಾಕರಿಸಿದೆ ಎಂದು ಹೇಳಿಕೊಳ್ಳತೊಡಗಿದಳಂತೆ.  ಇದನ್ನು ಕೇಳಿ ಕೆರಳಿದ ಕವಿ ಆಕೆಯನ್ನು ದೂರವಿರಿಸಿದುದಲ್ಲದೆ, ಸೌಜನ್ಯದ ಎಲ್ಲೆ ಮೀರಿ ಆಕೆಯನ್ನು ಕವನವೊಂದರಲ್ಲಿ ಲೇವಡಿ ಮಾಡಿದನಂತೆ. ಪೋಪ್‍ನನ್ನು ಕಂಡರೆ ಆಗದವರು ಕೆಲವರು ಆತನದು ಬರಿಯ ಕಾಯ ಮಾತ್ರವಲ್ಲ ಮನಸ್ಸೂ ವಿಕಾರವಾದುದು. ಆತ ಕಹಿ ಮನಸ್ಸಿನ ಜಗಳಗಂಟ, ಅಹಂಕಾರಿ. ಬಡತನದಲ್ಲಿದ್ದ ಕಿರಿಯ ಕವಿಗಳ ಬಗ್ಗೆ ಸಹಾನುಭೂತಿರಹಿತವಾದ ಟೀಕೆ ಮಾಡಿದ ಕೀಳು ಮನುಷ್ಯ. ಮಹಾ ಕೃಪಣ, ಮಾತಿನಲ್ಲಿ ಸದಾ ಕಟುಕಿ, ನಂಜು ಇರುವವನು ಎಂದು ದೂರಿದ್ದಾರೆ.  ಇವೆಲ್ಲ ನಿಜವಲ್ಲ ಎಂದು ಹೇಳುವವರೂ ಉಂಟು. ಈತ ಒಬ್ಬ ಶ್ರೇಷ್ಠ ಕವಿ ಎಂದು ಕೆಲವು ವಿಮರ್ಶಕರು ಹೇಳಿದರೆ, ಆತ ಮಾಡಿದ್ದು ಕೇವಲ ಪದ್ಯರಚನೆ, ಶ್ರೇಷ್ಠವಾದ ಕಾವ್ಯವನ್ನಲ್ಲ ಎಂದು ಹೇಳುವ ವಿಮರ್ಶಕರೂ ಉಂಟು.  ಪೋಪ್‍ನ ಮನಸ್ಸು ಸದಾ ಕಹಿಯಾಗಿರುತ್ತಿತ್ತು. ಆತನಲ್ಲಿ ಪ್ರೀತಿ, ಸಹಾನುಭೂತಿ ಇತ್ಯಾದಿ ಸದ್ಭಾವನೆಗಳೇ ಇರಲಿಲ್ಲ ಎಂಬುದು ನಿಜವಲ್ಲ.  ಆತನಿಗೆ ತಾಯಿ-ತಂದೆಯರ ಬಗ್ಗೆ ಅಪಾರ ಪ್ರೀತಿ ಇತ್ತು.  ಸ್ವಿಫ್ಟ್ ಬೋಲಿಂಗ್ ಬ್ರೋಕ್, ಆರ್ಬತ್‍ನಾಟ್ ಮುಂತಾದ ಕೆಲವು ಜನ ಆತ್ಮೀಯರ ಬಗ್ಗೆ ಆತ ತುಂಬ ಪ್ರೀತಿಸುತ್ತಿದ್ದ. ಮಾರ್ಥಾ ಬ್ಲೌಂಟ್‍ಳ ಬಗ್ಗೆ ಕಡೆಯವರೆಗೂ ನಿಷ್ಠನಾಗಿದ್ದ.  ಸಾಂದರ್ಭಿಕವಾಗಿ ಎಷ್ಟೇ ತೊಂದರೆ ಕಿರುಕುಳ ಕೊಟ್ಟರೂ ಅತೀವ ಪ್ರೀತಿ, ಸಹಾನುಭೂತಿಗಳಿಂದ ಸೇವಕರನ್ನು ನೋಡಿಕೊಂಡಿದ್ದರಿಂದಲೇ ಅವರೆಲ್ಲರೂ ಆತನನ್ನು ಬಹುವಾಗಿ ಇಷ್ಟಪಡುತ್ತಿದ್ದರು. ಪ್ರೀತಿಯಿಂದ ಸೇವೆ ಮಾಡುತ್ತಿದ್ದರು. ನಿಜವಾಗಿಯೂ ಕಷ್ಟದಲ್ಲಿ ದುಃಖದಲ್ಲಿ ಸಿಕ್ಕಿಕೊಂಡವರ ಬಗ್ಗೆ ಮರುಕಗೊಂಡು ಸಹಾಯ ಮಾಡುತ್ತಿದ್ದ.

ಪೋಪ್‍ನ ವೈಯಕ್ತಿಕ ಗುಣ-ಸ್ವಭಾವಗಳ ಬಗ್ಗೆ, ಕಾವ್ಯಗುಣದ ಬಗ್ಗೆ ಭಿನ್ನಾಭಿಪ್ರಾಯವಿದೆಯೇ ವಿನಾ ಆತನ ಕಾವ್ಯರಚನಾ ಸಾಮಥ್ರ್ಯದ ಬಗ್ಗೆ ವಿವಾದವಿಲ್ಲ. ಬಾಲ್ಯದಿಂದಲೂ ಪೋಪ್‍ನಿಗೆ ಕಾವ್ಯಗುರುವಾಗಿದ್ದ ಡ್ರೈಡನ್‍ನ ಪ್ರಭಾವ ಈತನ ಮೇಲೆ ಗಾಢವಾಗಿತ್ತು. ಡ್ರೈಡನ್‍ನ ಉತ್ತರಾಧಿಕಾರಿ ಎನ್ನುವಷ್ಟರ ಮಟ್ಟಿಗೆ ಅದೇ ಕಾವ್ಯಮಾದರಿಯನ್ನೂ ಪರಂಪರೆಯನ್ನೂ ಪೋಪ್ ಮುಂದುವರಿಸಿ ತನ್ನ ಕಾಲದ ಶ್ರೇಷ್ಠಕವಿ ಎಂದು ಹೆಸರಾದ. ಡ್ರೈಡನ್‍ನಿಂದ ವಿಶೇಷ ಶಕ್ತಿಯನ್ನೂ ವರ್ಣವೈಖರಿಯನ್ನೂ ಪಡೆದಿದ್ದ. “ಧೀರದ್ವಿಪದಿ” ಛಂದಸ್ಸಿಗೆ ಪೋಪ್ ಲಾಲಿತ್ಯವನ್ನೂ ನಯ ನಾಜೂಕಿನ ಮೆರುಗನ್ನೂ ಕೊಟ್ಟ. ದ್ವಿಪದಿಯ ನಡೆ ಗತ್ತುಗಳ ಸಂಪೂರ್ಣ ಹಿಡಿತ ಈತನಿಗೆ ಸಹಜವಾಗೇ ಬಂದಿತ್ತು. ಆದುದರಿಂದಲೇ ಅದರ ಸಂಪೂರ್ಣ ಸಾಧ್ಯತೆಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡ ಸಮರ್ಪಕ ಅಭಿವ್ಯಕ್ತಿ ಬೇರೆಲ್ಲೂ ಕಾಣುವುದಿಲ್ಲ.  

ಎಸ್ಸೆ ಆನ್ ಕ್ರಿಟಿಸಿಸಮ್‍ನಲ್ಲಿ ಮೂರು ಭಾಗಗಳಿವೆ. ಮೊದಲ ಭಾಗ ಆಗ ಇದ್ದ ವಿಮರ್ಶೆಯ ದುಸ್ಥಿತಿಯನ್ನು ಕುರಿತದ್ದು. ಎರಡನೆಯ ಭಾಗ ಪ್ರಕೃತಿಯನ್ನೇ ಅನುಸರಿಸಬೇಕೆಂಬ ಕವಿಯ ಮುಖ್ಯ ಸೂತ್ರವನ್ನು ವಿವರಿಸುತ್ತದೆ. ಮೂರನೆಯದು ಹೂರೇಸ್, ವರ್ಜಿಲ್, ಮುಂತಾದ ಪ್ರಾಚೀನ ಕವಿಶ್ರೇಷ್ಠರ ಬರಹಗಳಿಂದ ಹೇಗೆ ಕಾವ್ಯಲಕ್ಷಣಗಳನ್ನರಿತು ಕರಗತ ಮಾಡಿಕೊಳ್ಳಬೇಕೆಂಬುದರ ವಿವರಣೆ ಇದೆ. ರೇಪ್ ಆಫ್ ದಿ ಲಾಕ್ ಒಂದು ಸೊಗಸಾದ ವಿಡಂಬನ ಕಾವ್ಯ. ಅತ್ಯಂತ ಕಲಾತ್ಮಕವಾದರಚನೆ ಸಮಕಾಲೀನ ಸಮಾಜದ ಬದುಕನ್ನು ಮಾತ್ರವಲ್ಲ ಆ ಯುಗದ ಮನೋಧರ್ಮವನ್ನೇ ನೈಜವಾಗಿ, ಪರಿಣಾಮಕಾರಿಯಾಗಿ ಪ್ರತಿಬಿಂಬಿಸುತ್ತದೆ.
(ಕೆ.ಬಿ.ವಿ.)

	ಪೋಪ್‍ನ ಕವನಗಳು ವಿಡಂಬನೆಯ ಒಂದು ಮಾದರಿ. ಲೇವಡಿ ಮಾಡಲು ತಾನು ಆರಿಸಿಕೊಂಡ ವ್ಯಕ್ತಿಯ ಸ್ವಭಾವವನ್ನು ಹರಿತವಾದ ಭಾಷೆಯಲ್ಲಿ ಕೆತ್ತಿಡುತ್ತಾನೆ. ಇಂಥ ವಿಡಂಬನಾತ್ಮಕ ಚಿತ್ರಗಳಲ್ಲಿ ಆಟಿಕೆಸ್ ಎಂದು ಹೆಸರಿನಲ್ಲಿ ಇವನುರೂಪಿಸಿದ ಆಡಿಸನ್ನನ ಚಿತ್ರ ಶ್ರೇಷ್ಠವಾದುದು. ಆದರೆ ಒಟ್ಟಿನಲ್ಲಿ ಇವನು ವ್ಯಕ್ತಿ ಚಿತ್ರದಲ್ಲಿ ವ್ಯಕ್ತಿ-ಮಾದರಿ (ಟೈಪ್) ಎರಡರ ಸಮತೋಲನವನ್ನು ಸಾಧಿಸಲಿಲ್ಲ. (ಇದನ್ನು ಡ್ರೈಡನ್ ಮಾಡಿದ). ಇವನ ತಾಂತ್ರಿಕ ಪರಿಣತ ಅಸಾಧಾರಣ.
(ಎಲ್.ಎಸ್.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ